Horizontal Menu

Drop Down MenusCSS Drop Down MenuPure CSS Dropdown Menu

Monday 2 March 2015

ಹುಟ್ಟೂರ ಸನ್ಮಾನದಲ್ಲಿ ಕಾರಂತರ ಭಾಷಣ

'It is never too late' ಎಂದೊಂದು ಮಾತಿದೆ. ಅದರಂತೆ ಬಿವಿಕಾರಂತರೆಂಬ ರಂಗಸೂರ್ಯ ಇಡಿಯ ಭಾರತವನ್ನು ಹೊಸ ನೇಸರಿನಲ್ಲಿ ಮುಳುಗೇಳಿಸಿದ ಬಳಿಕ ಸ್ವಲ್ಪ ತಡವಾಗಿಯಾದರೂ ಅವರ ಹುಟ್ಟೂರಿನವರಾದ ನಾವೆಲ್ಲರೂ ಅವರನ್ನು ಕರೆಯಿಸಿ ಅವರಿಗೊಂದು ಹೃದಯಸ್ಪರ್ಶಿ ಸನ್ಮಾನವನ್ನು ಮಾಡಿದುದು ಈಗ ಇತಿಹಾಸವಷ್ಟೆ. ಆ ಸಂದರ್ಭದಲ್ಲಿ ಅವರು ಮಾಡಿದ ಭಾಷಣದ ಧ್ವನಿ ಮುದ್ರಿತ ಪ್ರತಿ ಇಲ್ಲದಿದ್ದರೂ‌ ಶ್ರೀಮತಿ ಡಾ ವಿದ್ಯಾ ಮನೋಹರ ಉಪಾಧ್ಯ ಅವರು ಅದನ್ನು ಆಲಿಸಿ ಬರಹರೂಪಕ್ಕಿಳಿಸಿದ ಸಂಗ್ರಹ ರೂಪ ಉಳಿದುಕೊಂಡಿದೆ. ಅದನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.

ಇಲ್ಲಿ ನೆರೆದಿರುವ ಹುಟ್ಟೂರಿನ ಬಂಧುಗಳೇ ಮತ್ತು ಅಭಿಮಾನಿ ಮಿತ್ರರೇ, ಎಲ್ಲರಿಗೂ ನನ್ನ ಕೃತಜ್ನತೆಗಳು. ಹುಟ್ಟೂರಿನಲ್ಲಿ ನಡೆದ ಈ‌ ಸನ್ಮಾನ ಸಮಾರಂಭವು ನನಗೆ ಆತ್ಮೀಯವಾಗಿದೆ. ಹುಟ್ಟೂರು ನನಗೆ ಬಹಳಷ್ಟನ್ನು ಕೊಟ್ಟಿದೆ. ನಾನು ನನ್ನ ನಾಟಕ ಜೀವನ ಆರಂಭಿಸಿದ್ದೇ ಇಲ್ಲಿ. ಇದೇ ರೀತಿಯಲ್ಲಿ ಆಗ ಈ ಶಾಲೆ 'L' ಆಕಾರದಲ್ಲಿತ್ತು. ಇಲ್ಲಿ ಮಧ್ಯದಲ್ಲಿ ಸ್ಟೇಜ್ ಇರ್ತಿತ್ತು.

ನನ್ನ ಮೊದಲ ನಾಟಕ ಈಗ ನೆನೆಸಿದರೆ ಅದೊಂದು ಪ್ರಹಸನ. ಅದರ ಹೆಸರು 'ಶುಕ್ರುಂಡೆ ಐತಾಳ ಮತ್ತು ಕುಂಬ್ಳಕಾಯಿ ಭಾಗವತ' ಅಂತ. ಬರೆದು ಆಡಿಸಿದ್ದೆಲ್ಲ ಇವರೇ (ಕಳವಾರು ರಾಮರಾಯರನ್ನು ತೋರಿಸುತ್ತಾ). ನಾನು ಶುಕ್ರುಂಡೆ ಐತಾಳ, ಇವರು (ಕಜೆ ವೆಂಕಟ್ರಮಣ ಭಟ್ಟ) ಕುಂಬ್ಳಕಾಯಿ ಭಾಗವತ. ಈ‌ ನಾಟಕದಲ್ಲಿ ನಮ್ಮ ಪ್ರವೇಶವೂ ಹಾಗೇ‌ ನಾಟಕೀಯವಾಗಿತ್ತು. ಈ‌ ಪ್ರವೇಶ ಯಾವಾಗಲೂ‌ ಚಂದವಾಗಿರಬೇಕಂತೆ. ಯಕ್ಷಗಾನದಲ್ಲಿ ಪಾತ್ರದ ಕುಣಿತಕ್ಕಿಂತಲೂ‌ ಪ್ರವೇಶ ನೋಡುವುದೇ ಚಂದ. ಎಂಥ ಪ್ರವೇಶ ಅಂತ ಹೇಳಿದರೆ ಮತ್ತೆ ಅವ ಕುಣಿಯದಿದ್ದರೂ, ಅದು ಚಂದ ಇತ್ತಂತ್ಲೇ ಲೆಕ್ಕ.

ನಮ್ಮ ನಾಟಕದಲ್ಲಿ ಒಂದು ಬದಿಯಿಂದ ಶುಕ್ರುಂಡೆ ಐತಾಳ ನನ್ನ ತನ್ನ ವೃತ್ತಿಯನ್ನು ಹಳಿಯುತ್ತಾ, "ನನ್ನದೆಂತಾ ಕೆಲಸ! ಶ್ರಾದ್ಧ ಮಾಡ್ಸಿ ಮಾಡ್ಸಿ ಸಾಕಾಯ್ತು. ಈ‌ ಕೆಲಸ ಮಾತ್ರ ಯಾರಿಗೂ ಬೇಡಪ್ಪ" ಅಂತ ಬೈಯುತ್ತಾ ಬರುತ್ತಾನೆ. ಇನ್ನೊಂದು ಬದಿಯಿಂದ ಕುಂಬ್ಳಕಾಯಿ ಭಾಗವತನೂ ಹಾಗೆಯೇ, "ಭಾಗವತಿಕೆ ಮಾಡಿ ಮಾಡಿ ಸಾಕಾಯ್ತು" ಅಂತ ತನ್ನ ವೃತ್ತಿಯನ್ನು ಬೈಯುತ್ತಾ ಬರುತ್ತಾನೆ. ಆ ಹಳೆಗನ್ನಡದ ಮಾತುಗಳು ಮಾತ್ರ ಈಗ ನೆನಪಾಗುವುದಿಲ್ಲ. ನನ್ನ ಕನ್ನಡವೂ‌ ಈಗ ಶುದ್ಧವಾಗಿಲ್ಲ. ಮೈಸೂರು ಕನ್ನಡ, ಬೆಂಗಳೂರು ಕನ್ನಡ ಅಂತ ಎಲ್ಲಾ ಬೆರಕೆಯಾಗಿದೆ. ಹೀಗೆ ಶುಕ್ರುಂಡೆ ಐತಾಳ ಮತ್ತು ಕುಂಬಳಕಾಯಿ ಭಾಗವತ ತಮ್ಮತಮ್ಮ ವೃತ್ತಿಯನ್ನು ಹಳಿಯುತ್ತಾ ಸ್ಟೇಜಿನ ಮಧ್ಯಕ್ಕೆ ಬಂದು ಢಿಕ್ಕಿಯಾಗಿ ನಿಲ್ಲುತ್ತಾರೆ. ಮತ್ತೆ ಅವರಿಬ್ಬರ ಮಧ್ಯೆ ಸಂಭಾಷಣೆ ಶುರುವಾಗುತ್ತದೆ. ಅವರು ಪರಸ್ಪರ ತಮ್ಮ ತಮ್ಮ ವೃತ್ತಿಯನ್ನು ಹೀಯಾಳಿಸತೊಡಗುತ್ತಾರೆ. ಕೊನೆಗೆ ಅವರಲ್ಲಿ ಒಂದು ಒಪ್ಪಂದವಾಗುತ್ತದೆ. ಇವ ಅವನಿಗೂ ಅವ ಇವನಿಗೂ‌ ಅವರವರ ವೃತ್ತಿಯನ್ನು ಕಲಿಸುವುದು ಅಂತ. ಹಾಗೆ ಕಲಿಸಲು ಆರಂಭಿಸುತ್ತಾರೆ.
ಶುಕ್ರುಂಡೆ ಐತಾಳ ಮಂತ್ರವನ್ನು ಕಲಿಸುತ್ತಾನೆ ಭಾಗವತನಿಗೆ. ಭಾಗವತ ಅದನ್ನು ಯಕ್ಷಗಾನ ಹಾಡಿದ ರೀತಿ ಹಾಡುತ್ತಾನೆ (ಹಾಗೆ ಹೇಳಿ ತೋರಿಸುತ್ತಾ). ಹಾಗೇನೇ‌ ಭಾಗವತ ಕಲಿಸಿದ ಹಾಡನ್ನು ಐತಾಳ ಮಂತ್ರದ ರೀತಿ ಹೇಳುತ್ತಾನೆ. ಇವರು ಎಷ್ಟು ಪ್ರಯತ್ನಿಸಿದರೂ ಇನ್ನೊಬ್ಬರ ವೃತ್ತಿಯನ್ನು ಅವರಿಂದ ಕಲಿಯಲಿಕ್ಕಾಗುವುದೇ ಇಲ್ಲ. ಕೊನೆಗೆ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ನಮ್ಮನಮ್ಮ ವೃತ್ತಿಯೇ ನಮಗೆ ಶ್ರೇಷ್ಠ ಎಂದು ಇಬ್ಬರೂ ಹೊರಡುತ್ತಾರೆ. ಹೀಗೆ ನಾಟಕ ಮುಗಿಯುತ್ತದೆ. ಇದೊಂದು ಸಣ್ಣ ನಾಟಕ ಸುಮಾರು ಹತ್ತು ಹದಿನೈದು ನಿಮಿಷದ್ದು ಅಷ್ಟೆ. ಆದರೆ ಇದು ನನ್ನ ಮನಸ್ಸಿನಲ್ಲಿ ಸುಮಾರು ವರುಷಗಳವರೆಗೆ ಇತ್ತು. ಮುಂದೆ ಇದೇ ನಾಟಕವನ್ನು ನಾನು ಸ್ವಲ್ಪ ಬದಲಾಯಿಸಿ ನಾನು ಆಡಿಸಿಯೂ ಇದ್ದೆ. ಅಲ್ಲಿ ನಾನು ಮಾಡಿದ್ದ ಬದಲಾವಣೆ ಅಂದ್ರೆ ಒಬ್ಬ ಹಜಾಮನ ಪಾತ್ರವನ್ನು ಸೇರಿಸಿದ್ದು. ಇದನ್ನು ನಾನು ನನ್ನ ಸಂಗೀತ ಗುರುಗಳಾದ ಶ್ರೀ ಓಂಕಾರನಾಥ ಥಾಕೂರರು ಮತ್ತು ಸಾಹಿತ್ಯ ಗುರುಗಳಾದ ಮಿಶ್ರಾರವರ ಮುಂದೆ ಮಾಡಿದ್ದು. ಆ ನಾಟಕದಲ್ಲಿ ಹೀಗೆ, ಒಬ್ಬ ಸಂಗೀತಗಾರ, ಇನ್ನೊಬ್ಬ ಸಾಹಿತಿ. ಇಬ್ಬರಿಗೂ‌ ತಮ್ಮ ತಮ್ಮ ವೃತ್ತಿ ಬಿಟ್ಟರೆ ಇನ್ನೇನೂ ಗೊತ್ತಿರುವುದಿಲ್ಲ. ಆದರೆ ಹಜಾಮ ಮಾತ್ರ ಎರಡನ್ನೂ ತಿಳಿದವನಾಗಿರುತ್ತಾನೆ. ಇಬ್ಬರಿಗೂ‌ ಹಜಾಮನನ್ನು ಕಂಡಾಗ ನಾಚಿಕೆಯಾಗುತ್ತದೆ. ಹಜಾಮನಿಗಿದ್ದಷ್ಟು ವಿವೇಕ ತಮಗಿಲ್ಲವಲ್ಲ ಅಂತ ಪಶ್ಚಾತ್ತಾಪ ಪಡುತ್ತಾರೆ. ನಾನು ಈ‌ ಉದಾಹರಣೆ ಕೊಟ್ಟದ್ದೇಕೆಂದರೆ ಬಾಲ್ಯದಲ್ಲಿ ನಡೆದ ಘಟನೆಗಳು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿರಬೇಕು. ಮುಂದೆ ಇದರಿಂದಲೇ‌ ಈ ನಾಟಕವನ್ನು ಬೆಳೆಸಿ ಪ್ರದರ್ಶಿಸಲು ಸಾಧ್ಯವಾಯ್ತು ಅಂತ. ನನ್ನ ಗುರುಗಳಿಬ್ಬರೂ‌ ಈ ನಾಟಕ ನೋಡಿ ಏನು ತಿಳಿದುಕೊಂಡರು ಗೊತ್ತಿಲ್ಲ.

ನಾನು ಸಣ್ಣವನಿದ್ದಾಗ ಯಾವಾಗಲೂ‌ ಹೋಗುತ್ತಿದ್ದ ಮನೆಗಳೆಂದರೆ, ಪತ್ತುಮುಡಿ ಪಟೇಲರದ್ದು ಮತ್ತು ಇನ್ನೊಂದು ಇಲ್ಲೇ ಹತ್ತಿರದಲ್ಲಿರುವ ಕಜೆಮನೆ. ಪಟೇಲರ ಮನೆ ದೊಡ್ಡದು. ಬಂದು ಹೋಗುವವರು ಜಾಸ್ತಿ. ನಮ್ಮದು ತೀರಾ ಬಡ ಕುಟುಂಬ. ನಾನು ನನ್ನ ತಂಗಿ ಆಗಾಗ ಮಜ್ಜಿಗೆ ತರಲು ಪತ್ತುಮುಡಿಗೆ ಹೋಗುವುದಿತ್ತು. ಮಳೆಗಾಲವಾದರೆ ಅರ್ಧ ಲೋಟ ಮಜ್ಜಿಗೆ ಕುಡಿದು, ಉಳಿದ ಅರ್ಧಕ್ಕೆ ತೊರೆಯಲ್ಲಿ ಹರಿಯುತ್ತಿದ್ದ ಮಳೆನೀರನ್ನು ಸೇರಿಸಿ ಮನೆಗೆ ತರುತ್ತಿದ್ದೆವು. ಇನ್ನು ಶನಿವಾರ ಭಾನುವಾರಗಳಲ್ಲಿ ತಪ್ಪದೇ ಕಜೆಗೆ ಹೋಗುತ್ತಿದ್ದೆ. ಅಲ್ಲಿಯ ಹಿರಿಯರು ದಿ.ರಾಮಕೃಷ್ಣ ಭಟ್ ಅಂತ. ಅವರ ಮಗಂದಿರು ನನ್ನ ಸಹಪಾಠಿಗಳು. ದೊಡ್ಡವರು ಈಶ್ವರ ಭಟ್, ಅವರಿಗೆ ಮಾತು ಕಡಿಮೆ. ಎರಡನೆಯವರು ವೆಂಕಟ್ರಮಣ ಭಟ್, ನೋಡಿ ಓ ಅಲ್ಲಿ ಕೂತಿದ್ದಾರೆ. ಕೊನೆಯವರು ಮಹಾಬಲ ಭಟ್. ಈಗ ಮಾತಾಡಿದರಲ್ಲಾ, ಅವರು, ರಜಾದಿನಗಳಲ್ಲಿ ನಾವೆಲ್ಲ ಸೇರಿ ನಾಟಕ, ಯಕ್ಷಗಾನ ಎಲ್ಲ ಮಾಡುತ್ತಿದ್ದೆವು. ದಿ.ರಾಮಕೃಷ್ಣ ಭಟ್ಟರು ಇದಕ್ಕೆಲ್ಲ ತುಂಬಾ ಪ್ರೋತ್ಸಾಹ ಕೊಡುತ್ತಿದ್ದರು. ಆಗೆಲ್ಲ ಮನೆಯಲ್ಲಿ ಯಾರೂ‌ ನಮ್ಮನ್ನು ವಿಚಾರಿಸುತ್ತಲೂ ಇರಲಿಲ್ಲ. ಎರಡು ದಿನ ಕೂಳು ಹಾಕುವುದು ತಪ್ಪಿತಲ್ಲ ಅಂತ ಖುಷಿ ಪಡುತ್ತಿದ್ದರು. ಆಗ ಬಡತನ ಎಷ್ಟಿತ್ತು ಅಂತ ತಿಳಿಸಲು ಇದನ್ನು ಹೇಳಿದೆ.

ನಾನು ಸಣ್ಣವನಿದ್ದಾಗ ಇಲ್ಲಿ ಕಂಡ, ಅನುಭವಿಸಿದ ದೃಶ್ಯಗಳು ನನ್ನ ಮನಸ್ಸಿನಲ್ಲಿ ತುಂಬಾ ಸಮಯದವರೆಗೆ ನೆನಪಿನಲ್ಲಿದ್ದು ಪ್ರಭಾವ ಬೀರಿವೆ. ಈಗ ಗುಲ್ವಾಡಿಯವರು ಹೇಳಿದ್ರಲ್ವಾ, ನಾನು ಅವರಮ್ಮನ ಹತ್ರ ಬಾಳಕ ಮಾಡಲು ಹೇಳುತ್ತಿದ್ದೆ ಅಂತ, ಅದೆಲ್ಲ ಇಲ್ಲಿಯ ಅಮ್ಮ ಮಾಡುತ್ತಿದ್ದ ತಿಂಡಿಯ ನೆನಪುಗಳೇ, ಹಾಗೆ ಹೇಳಲು ಕಾರಣವೇನೋ.

ಸಣ್ಣವನಿದ್ದಾಗ ನಾನು ತುಂಬಾ ಯಕ್ಷಗಾನ ನೋಡುತ್ತಿದ್ದೆ. ರಾತ್ರಿ ಇಡೀ ಯಕ್ಷಗಾನ ನೋಡುವುದು. ಮಾರನೆಯ ದಿನ ಯಕ್ಷಗಾನ ಪೆಟ್ಟುಗಳೇ ತಲೆಯಲ್ಲಿ ರಣಗುಡುತ್ತಿದ್ದವು. ಈ‌ ತಾಳದ ರಣಗುಟ್ಟುವಿಕೆಯೇ ನನಗೆ ಮುಂದೆ ಜಾನಪದ ಹಾಡುಗಳು ಮತ್ತು ಅವುಗಳ ಲಯದಲ್ಲಿ ಆಸಕ್ತಿ ಹುಟ್ಟುವ ಹಾಗೆ ಮಾಡಿದ್ದೋ ಏನೋ!.

ಹಾಗೆ ಪತ್ತುಮುಡಿ ಮನೆಯಲ್ಲಿ ನಡೆಯುತ್ತಿದ್ದ ಘಟನೆಗಳು ತುಂಬಾ ಪ್ರಭಾವ ಬೀರಿವೆ. ಒಮ್ಮೆ ಅಲ್ಲಿ ಬೆಳಕಿಲ್ಲದಾಗ ಕತ್ತಲೆಯಲ್ಲಿ ಉರಿಸಿಟ್ಟಿದ್ದ ಊದುಬತ್ತಿಯನ್ನು ಹಿಡಿದುಕೊಂಡು ಹೋಗುವುದನ್ನು ಕಂಡಿದ್ದೆ. ಆ ದೃಶ್ಯ ನನಗೆ ಆಮೇಲೆ ನನ್ನ ಒಂದು ನಾಟಕದಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯ ಮಾಡಿದ್ದು. ಇನ್ನೊಂದು ಸರ್ತಿ ಪಟೇಲರ ಮನೆಯಲ್ಲಿ ಪಂಚಾಯಿತಿ ನಡೆಯುತ್ತಿದ್ದನ್ನು ಕಂಡಿದ್ದೆ. ಎಲ್ಲರೂ ದೊಡ್ಡ ಸ್ವರದಲ್ಲಿ ಕೈಕರಣ ಮಾಡುತ್ತಾ ಎದುರು ಪಂಗಡದವರನ್ನು ಬೈಯುತ್ತಿದ್ದ ದೃಶ್ಯ ನೆನಪಿನಲ್ಲಿತ್ತು. ಅದೇ 'ಚೋಮನದುಡಿ'ಯಲ್ಲಿ ಈ‌ ದೃಶ್ಯ ನಿರ್ದೇಶಿಸಲು ಕಾರಣವಾಯಿತು.

ಒಂದು ಸರ್ತಿ ಒಂದು ಹುಲಿವೇಷ ಕುಣಿತ ನಡೀತಾ ಇತ್ತು. ಎಲ್ಲರೂ‌ ಕುಣಿತವನ್ನು ನೋಡ್ತಾ ಇರಬೇಕಾದರೆ ನನಗೂ‌ ಆವೇಶ ಬರ್ತಾ ಇತ್ತು. ನಾನೂ ಹಾಗೇ ಕುಣಿಯಬಲ್ಲೆ ಅಂತ ತೋರಿಸಲು ನಾನು ಮುಖ ಉಬ್ಬಿಸಿ ಕೂತಿದ್ದೆ, ಎಲ್ಲರೂ ನನ್ನ ನೋಡ್ಬೇಕು ಅಂತ. ಆಮೇಲೆ ಗೊತ್ತಾಯ್ತು ಸೈಕಾಲಜಿ ಪುಸ್ತಕ ಎಲ್ಲ ಓದಿದ ನಂತರ, ಅದು ಒಂದು ರೀತಿಯ ಮಾನಸಿಕ ಅವಸ್ಥೆ, ಅದಾಗಲೇ ನನ್ನಲ್ಲಿತ್ತು ಅಂತ. ಮುಂದೆ ಇಲ್ಲಿ ನಾನು 'ನನ್ನ ಗೋಪಾಲ' ಅಂತ ಒಂದು ನಾಟಕದಲ್ಲಿ ಅಭಿನಯಿಸಿದೆ. ಅದನ್ನು ಬರೆದು ನಿರ್ದೇಶಿಸಿದವರು ಪಿ.ಕೆ. ನಾರಾಯಣ ಅವರು. ಅದರಲ್ಲಿ ನನ್ನ ಪಾರ್ಟು ಗೋಪಾಲನದ್ದು. ನನ್ನೊಂದಿಗೆ ಪಾತ್ರಧಾರಿಗಳಾಗಿ ಕಜೆ ವೆಂಕಟ್ರಮಣ ಭಟ್ಟರೂ ಇದ್ದರು. ಗುರುಗಳ ಪಾತ್ರ ಮಾಡಿದವರು ಅಬ್ಬು ಬ್ಯಾರಿ ಅಂತ. ಆಗ ನಾವು ಅವರನ್ನು ಗುರುಗಳು ಅಂತಲೇ ಕರೆಯುತ್ತಿದ್ದೆವು.

ಸಣ್ಣವನಿದ್ದಾಗ ನನಗೆ ನೆನಪಿರುವ ಇನ್ನೊಂದು ವಿಷಯವೆಂದರೆ ಒಂದೂ‌ ವಿಶೇಷ ಊಟ ಬಿಡದೆ ತಪ್ಪದೇ ಹಾಜರಾಗುತ್ತಿದ್ದುದು. ಎಲ್ಲಾ ಮದುವೆ, ಮುಂಜಿ, ಶ್ರಾದ್ಧದ ಊಟಗಳಿಗೆ ಹೋಗುತ್ತಿದ್ದೆ. ಒಂದು ಸರ್ತಿ ಮದುವೆ ಮನೆಯಲ್ಲಿ ಊಟಕ್ಕೆ ಎಂಟಾಣೆ ದಕ್ಷಿಣೆ ಕೊಟ್ಟಿದ್ದರೆ. ಆಗಿನ ಕಾಲದಲ್ಲಿ ಎಂಟಾಣೆ ಎಂದರೆ ಭಾರೀ‌ ದೊಡ್ಡ ಮೊತ್ತ. ಮತ್ತೆ ನವರಾತ್ರಿ ಸಮಯದಲ್ಲಿ ಪತ್ತುಮುಡಿಯಲ್ಲಿ ಒಂಭತ್ತು ದಿನವೂ ಊಟ ಇರ್ತಿತ್ತು. ದಿನಕ್ಕೆ ಎರಡಾಣೆ ದಕ್ಶಿಣೆ ಕೊಡುತ್ತಿದ್ದರು. ಎರಡೊಂಬತ್ಲಿ ಹದಿನೆಂಟಾಣೆ. ಆದರೆ ಅದು ನಮ್ಮ ಕೈಗೆ ಸಿಗುತ್ತಿರಲಿಲ್ಲ. ಅಪ್ಪ ಪಟೇಲರ ಹತ್ರ ಹೇಳಿ ಅವರೇ ತೆಗೆದುಕೊಳ್ಳುತ್ತಿದ್ದರು. ಎಲ್ಲಿ ದಕ್ಷಿಣೆ ಸಿಕ್ಕಿದರೂ ಅದನ್ನು ಅಪ್ಪನಿಗೆ ಕೊಡುತ್ತಿದ್ದದು ಚೆನ್ನಾಗಿ ನೆನಪಿದೆ.

ನನಗೆ ಸಣ್ಣದರಲ್ಲಿ ಎರಡು ವಿಷಯಗಳ ಬಗ್ಗೆ ತುಂಬಾ ಹೆದರಿಕೆ ಇತ್ತು. ಒಂದು ಪೋಲೀಸರದ್ದು, ಇನ್ನೊಂದು ಶ್ರೀಮಂತರದ್ದು. ನನಗೆ ಶ್ರೀಮಂತರನ್ನು ಕಂಡರೆ ಈಗಲೂ ಹೆದರಿಕೆಯೇ. ನನಗೆ ನೂಜಿಬೈಲು ಗೋವಿಂದ ಭಟ್ಟರನ್ನು ಕಂಡರೆ ತುಂಬಾ ಹೆದರಿಕೆಯಿತ್ತು. ಒಮ್ಮೆ ತಂದೆಯವರು ಅವರನ್ನು ಮಾತನಾಡಿಸುತ್ತಿದ್ದುದನ್ನು ಕಂಡೆ. ಅದೂ ಕಾರಲ್ಲಿ ಹೋಗುತ್ತಿದ್ದ ಗೋವಿಂದ ಭಟ್ಟರನ್ನು ನಿಲ್ಲಿಸಿ, ನಮ್ಮ ದನವನ್ನು ಹೋರಿಗೆ ಬಿಡಲು ಅಲ್ಲಿಗೆ ತರುವುದಾಗಿ ಅಪ್ಪ ಹೇಳಿದ್ದನ್ನು ನೋಡಿದೆ. ಅದರ ನಂತರ ನನಗೆ ಅಪ್ಪನ ಬಗ್ಗೆ ಅಭಿಮಾನವೆನಿಸಿತು. ಹಾಗೇ ಇನ್ನೊಂದು ಸಲ ಅಪ್ಪ ಯಾವುದೋ ಜಾಗದ ವಿಷಯವಾಗಿ ಮನೆಗೆ ಬಂದ ಪೋಲೀಸರಲ್ಲಿ ಮಾತನಾಡಿದ್ದು ಕಂಡೆ. ಅಬ್ಬಾ ಅಪ್ಪನಿಗೆ ಎಷ್ಟು ಧೈರ್ಯವಿದೆ ಅಂತ ಅನಿಸಿ ಭಾರೀ‌ಅಭಿಮಾನ ಪಟ್ಟಿದ್ದೆ.

ನಮ್ಮ ಮನೆಯಲ್ಲಿ ಆಗಾಗ ಭಜನಿಗಳಾಗುತ್ತಿದ್ದವು. ನಾನು ಬಾಲಕೃಷ್ಣ, ತಂಗಿ ಎಲ್ಲಾ ಪಾಲ್ಗೊಳ್ಳುತ್ತಿದ್ದೆವು. ಈಗ ಕೃಷ್ಣ ಹಾಡುವುದನ್ನು ಕೇಳಿದಾಗ ಅವ ಹಾಡಬೇಕಾದ್ದೇ ಅಂತನ್ನಿಸುತ್ತದೆ. ಹಾಗೆ ನನಗೆ ಸಂಗೀತದಲ್ಲಿ ಒಲವು ಆರಂಭವಾಯಿತು.

ಊರಲ್ಲಿ ಆಗಾಗ ನೋಡುತ್ತಿದ್ದ ಮದುವೆಗಳೇ ನನಗೆ ಮುಂದೆ ನಾಟಕದಲ್ಲಿ ಅಂತಹ ದೃಶ್ಯವನ್ನು ಹಾಕಲು ಕಾರಣವಾಗಿರಬಹುದು.

ಇಷ್ಟಲ್ಲದೆ ನನಗೆ ನೆನಪಿರುವ ಇನ್ನೂ ಕೆಲವರಲ್ಲಿ ನನ್ನ ಗುರುಗಳೂ ಒಬ್ಬರು. ಅವರೇ ಪುಚ್ಚೆಕೆರೆ ಶಂಕರ ಮಯ್ಯ. ಗುರುಗಳು ಏಕೆಂದರೆ ಅವರು ನನಗೆ ಕೆಲವಾರು ವಿಷಯಗಳನ್ನು ಹೇಳಿಕೊಟ್ಟಿದ್ದರು. ಅವರೇ ನನಗೆ ಬೀಡಿ ಎಳೆಯಲು ಹೇಳಿಕೊಟ್ಟದ್ದು (ಬೀಡಿ ಎಳೆಯಲು ಕಲಿತದ್ದು ಯಾವ ಯಾವ ಜಾಗಗಳಲ್ಲಿ, ಯಾವ ಅಂಗಡಿಯಿಂದ ಬೀಡಿ, ಬೆಂಕಿಕಡ್ಡಿ ಕದಿಯುತ್ತಿದ್ದದ್ದು ಇತ್ಯಾದಿ ವಿವರಗಳು). ಮೊದಲು ಶಂಕರ ಮಯ್ಯ ಬೀಡಿ ಎಳೆದು ನಂತರ ಅದನ್ನು ಅವರಿಗೆ (ಕಜೆ ವೆಂಕಟ್ರಮಣ ಭಟ್ಟರು), ಅವರು ಎಳೆದು ನನ್ಗೆ ಥರ್ಡ್ ಹಾಂಡ್ ಬೀಡಿ ಸಿಗುತ್ತಿತ್ತು!. ಹೀಗೇ ನಾನು ಥರ್ಡ್ ಹಾಂಡ್ ಮೂಲಕ ಬೀಡಿ ಎಳೆಯಲು ಕಲಿತೆ. ಇದಲ್ಲದೆ ಶಂಕರ ಮಯ್ಯ ಕಲಿಸಿದ ಇನ್ನ್ನೊಂದು ವಿಷಯವೆಂದರೆ ತುಳು ಬೈಗುಳ ಶಬ್ದಗಳು. ಆಗ ನನಗೆ 'ಹಡಬೆ' ಈ‌ ಒಂದೆರಡು ಶಬ್ದಗಳು ಮಾತ್ರ ಬರುತ್ತಿದ್ದವು. ನಾವೆಲ್ಲ ಆಗ ಗುಡ್ಡದ ಮೇಲೆ ಹೋಗಿ, ಮೊದಲು ಶಂಕರ ಮಯ್ಯ ತುಳುವಿನಲ್ಲಿ ಬೈಗುಳ ಕೂಗುವುದು, ನಂತರ ನಾವೂ ಹಾಗೇ ಹೇಳಿ ಕಲಿಯುತ್ತಿದ್ದೆವು. ಕುಕ್ಕಾಜೆಯಲ್ಲಿ.. ವರೆಗೆ ಕಲಿತ ನಂತರ ನಾನು ಮುಂದೆ ವಿಟ್ಲಕ್ಕೆ ಹೋದೆ.. ಅಲ್ಲಿ ಮನೆಯಲ್ಲಿ ವಾಸ. ಅಲ್ಲಿಯೂ ಯಕ್ಷಗಾನ ನೋಡುತ್ತಿದ್ದೆ. ನನಗೆ ಅಲ್ಲಿ ಆದ ಇನ್ನೊಂದು ಲಾಭವೆಂದರೆ ಓದಲು ಬೇಕಾದಷ್ಟು ಪುಸ್ತಕ ದೊರೆಯುತ್ತಿದ್ದುದು. ತುಂಬಾ ಪುಸ್ತಕಗಳನ್ನು ಓದುತ್ತಿದ್ದೆ. ಆಗ ಬರುತ್ತಿದ್ದ .. ಮುಂತಾದವುಗಳನ್ನೆಲ್ಲ ತಪ್ಪದೇ ಓದುತ್ತಿದ್ದೆ. ಇದಲ್ಲದೆ ಅರೇಬಿಯನ್ ನೈಟ್ಸ್ ಮುಂತಾದ ಪುಸ್ತಕ ಓದಲು ಸಿಕ್ಕಿದ್ದು ನನ್ನ ಅದೃಷ್ಟ. ಆಗ ಓದಿದ ಕಥೆಗಳಿಂದಾಗೇ‌ ನಾನು ಮಕ್ಕಳ ನಾಟಕಗಳಲ್ಲೂ‌ ಆಸಕ್ತಿ ತಾಳುವಂತಾಯಿತು.

ಆಗ ನಾನು ಮಾಡಿದ ಇನ್ನೊಂದು ಕೆಲಸವೆಂದರೆ ಪುತ್ತೂರಲ್ಲಿ ಶಾಸ್ತ್ರೀಯ ಸಂಗೀತ ಕಲಿಯಲು ಆರಂಭಿಸಿದ್ದು. ಪುತ್ತೂರಲ್ಲಿ ಸಂಗೀತ ಕಲಿಯುತ್ತಿದ್ದೆ ಮತ್ತು ಮಿತ್ತೂರಲ್ಲಿ ಸಂಗೀತ ಕಲಿಸುವುದಕ್ಕೂ ಆರಂಭಿಸಿದೆ. ಪುತ್ತೂರಲ್ಲಿ ಸ,ರಿ,ಗ,ಮ ಕಲಿತು ಮಿತ್ತೂರಲ್ಲಿ ಸ,ರಿ ವರೆಗೆ ಕಲಿಸಿದರೆ, 'ಪದನಿಸ' ಕಲಿತ ನಂತರೆ 'ಸರಿಗಮ' ಕಲಿಸುತ್ತಿದ್ದೆ.

ಇದೇ ಸಂದರ್ಭದಲ್ಲಿ ನನಗೆ ನಾನು ಸಾಹಿತಿಯಾಗಬೇಕೆಂಬ ಬಯಕೆ ಹೊತ್ತು ಕವಿಯಾಗ ಹೊರಟದ್ದು ನೆನಪಾಗುತ್ತದೆ. ಭಾಮಿನಿ ಷಟ್ಪದಿಯ ಒಂದು ಪದ್ಯ ರಚಿಸಿಯೂ ಇದ್ದೆ. ಮುಂದೆ ಇದನ್ನು ಯಾರ ಮುಂದೆಯೋ ತೋರಿಸಿದಾಗ ಶಾಸ್ತ್ರಬದ್ಧವಾಗಿಲ್ಲವೆಂದದ್ದರಿಂದ, ಅಲ್ಲಿಗೇ ಕೈಬಿಟ್ಟೆ. ಇನ್ನೊಂದು ಸಲ ಶಬ್ದ ಭಂಡಾರ್ ಬೆಳೆಸೋ ಸಲುವಾಗಿ ಶಬ್ದಕೋಶದ ಮೊದಲ ಇಪ್ಪತ್ತು ಪುಟಗಳನ್ನು ಬಾಯಿಪಾಠ ಮಾಡಿದ್ದೆ. ನಂತರ ಇದೆಲ್ಲ ಆಗುವಹೋಗುವ ಕೆಲಸವಲ್ಲವೆಂದು ಅಲ್ಲಿಗೇ ನಿಲ್ಲಿಸಿದೆ.

ನನಗೆ ನೆನಪಿರುವ ಇನ್ನೊಂದು ಸಂಗತಿಯೆಂದರೆ ನಾನು ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಕೊಟ್ಟದ್ದು. ದಿ ಕಜೆ ರಾಮಕೃಷ್ಣ ಭಟ್ಟರು ಅದನ್ನು ಏರ್ಪಾಟು ಮಾಡಿದ್ದರು. ಅದು ಕುಕ್ಕಾಜೆಯಲ್ಲಿಯೇ. ಆಗ ಸ್ವತ: ಅವರೇ ಹಿಮ್ಮೇಳದಲ್ಲಿ ಮದ್ದಳೆ ನುಡಿಸಿದ್ದರು. ದಿ ರಾಮಕೃಷ್ಣ ಭಟ್ಟ್ರ ಹೆಸರಿನೊಡನೆ ನನಗೆ ನೆನಪಾಗುವ ಇನ್ನೊಂದು ಪ್ರಸಂಗವಿದೆ. ನಾನು ಮನೆಬಿಟ್ಟು ಹೋಗಲು ನಿರ್ಧರಿಸಿದ ಪ್ರಸಂಗ. ಆಗ ನಾನು ನನ್ನ ನಿರ್ಧಾರವನ್ನು ತಿಳಿಸಿ ಮೂರು ಕಾಗದಗಳನ್ನು ಬರೆದಿದ್ದೆ. ಒಂದು ... ಅವರಿಗೆ. ಎರಡನೆಯದು ಕಜೆ ರಾಮಕೃಷ್ಣ ಭಟ್ಟರಿಗೆ. ಇನ್ನೊಂದು ಅಪ್ಪನಿಗೆ. ಅಪ್ಪನಿಗೆ ಬರೆದ ಕಾಗದವನ್ನು ಮನೆಯ ಜಂತೆಯ ಮೇಲೆ ಇಟ್ಟಿದ್ದೆ. ಅದರಲ್ಲಿ ಅಪ್ಪನ ಕಾಗದ ಅವರಿಗೇ ಮೊದಲು ಸಿಕ್ಕಿ ಬಿಡ್ತು. ಓದಿ ಅವರೇನೂ ಹೇಳಲಿಲ್ಲ. ಆದರೆ ಅಮ್ಮ ಶನಿವಾರ ಮನೆಬಿಟ್ಟ ಇನ್ನು ಒಂದು ಕಡೆ ನೆಲೆ ನಿಲ್ಲುವುದಿಲ್ಲ ಎಂದು ಆಡಿದ್ದಳು. ನನ್ನ ಜೀವನದಲ್ಲಿ ಹಾಗೇ ಆಯಿತು. ಎಲ್ಲೂ ಒಂದು ಕಡೆ ನಾನು ಗಟ್ಟಿಯಾಗಿ ನಿಲ್ಲಲಿಲ್ಲ. ಅದು ಅವಳು ಹೇಳಿದ್ದರಿಂದಲೋ ಏನೋ.

ಮನೆಬಿಟ್ಟ ನಾನು ಮಂಗಳೂರಿನಿಂದ ಮೈಸೂರಿಗೆ ಮಾಡರ್ನ್ ಬಸ್ ಸರ್ವೀಸ್ ಎಂಬ ಬಸ್ಸಲ್ಲಿ ಹೋದೆ. ಅಲ್ಲಿ ಆಫೀಸಲ್ಲಿ ನನ್ನ ಚೀಲ ಇಟ್ಟಿದ್ದೆ. ನಾನು ಕೆಲಸ ಹುಡುಕಲು ಆರಂಭಿಸಿದಾಗ ನಾಟಕ ಕಂಪನಿ ಸೇರಿಬಿಟ್ಟೆ. ಯಾರೋ‌ ಒಬ್ಬರು ನನ್ನ ಬಗ್ಗೆ ಬರೀತಾ karanth's life is full of accidents, not incidents ಅಂತ ಬರೆದಿದ್ದು ನಿಜ ಅಂತ ನನಗೆ ಎಷ್ಟೋ‌ಸಾರಿ ಅನಿಸಿದ್ದಿದೆ. ನಾನು ಗುಬ್ಬಿ ಕಂಪನಿ ನಾಟಕ ನಡೀತಾ ಇದ್ದಲ್ಲಿಗೆ ಸೀದಾ ಹೋದೆ. ಅಲ್ಲಿ ಹೋಗಿ ಕೆಲಸ ಕೇಳಿದೆ. ನಾನು ಸಂಗೀ‌ತ ಸ್ವಲ್ಪ ಸ್ವಲ್ಪ ಕಲಿತದ್ದನ್ನು ಹೇಳಿದ ನಂತರ ಅಲ್ಲಿ ಅವರು ಒಂದು ಹಾಡು ಹಾಡಲು ಹೇಳಿದರು. ನಾನು ಅದಕ್ಕೆ ಹಾಡುವಾಗ ಪೆಟ್ಟು ತಪ್ತದೆ ಅಂತ ಹೇಳಿದೆ. ಈ ಮಂಗಳೂರು ಕಡೆ ತಾಳಕ್ಕೆ 'ಪೆಟ್ಟು' ಅಂತ ಹೇಳುವ ರೂಢಿ. ಹಾಗೆ ನಾನು ಪೆಟ್ಟು ತಪ್ತದೆ ಅಂತ ಹೇಳುವಾಗ 'ಪೆಟ್ಟು ತಪ್ಪಿದರೆ ಪೆಟ್ಟು ಬೀಳ್ತದೆ' ಅಂತ ಅವರು ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ. ನಂತರ ನಾನು ಹಾಡಿದೆ. ಮೆಚ್ಚಿಕೊಂಡು ನನಗೆ ಗುಬ್ಬಿ ಕಂಪನಿಯಲ್ಲಿ ಕೆಲಸ ಕೊಟ್ಟರು. ನಂಗೆ ಅಲ್ಲಿ ಕೆಲಸ ಸಿಕ್ಕಿದ್ದು ಕೇಳಿ ತುಂಬಾ ಸಂತೋಷ, ಆಶ್ಚರ್ಯ ಆಯಿತು. ನಾನು ಮೈಸೂರಿಗೆ ಹೋದ ಕೂಡಲೇ ಅಲ್ಲಿ ಹೋಟೆಲು ಮಾಣಿಯಾಗಿ ಕೆಲಸ ಮಾಡುತ್ತಿದ್ದ ಊರಿನ ಹುಡುಗನೊಬ್ಬ ಸಿಕ್ಕಿದ್ದ. ಅವನು 'ಬಾ ನಿಂಗೆ ಇಲ್ಲಿ ಕೆಲಸ ಕೊಡಿಸ್ತೀನಿ' ಅಂತ ಹೇಳಿದ್ದ. ನಾನು ಗುಬ್ಬಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತಲ್ಲ, ಅದಕ್ಕೆ ಗತ್ತಲ್ಲಿ, 'ಏನೂ ಬೇಡ, ನಂಗೆ ಕೆಲಸ ಸಿಕ್ಕಿದೆ, ನಾಟಕ ಕಂಪ್ನೀಲಿ' ಎಂದು ಹೇಳಿದ್ದೆ. ಅವನಿಗೆ ಕೆಲ್ಸ ಸಿಕ್ಕಿ ಬಿಡ್ತಾ‌ಅಂತ ಆಶ್ಚರ್ಯ ಆಯಿತು. ಹೀಗೆ ನಾನು ಒಂದು ದಿನ ತಡವಾಗಿದ್ದಿದ್ದರೆ ಹೋಟೆಲ್ ಮಾಣಿಯಾಗಿ ಬಿಡುತ್ತಿದ್ದೆ. ಮಾಣಿಯಾಗಿ ಮುಂದೆ ದಾಸಪ್ರಕಾಶ್, ತಾಜ್ ಮಹಲ್ ಇಡ್ತಿದ್ದೆನೋ ಏನೋ. ಮುಂದೆ ಗುಬ್ಬಿ ಕಂಪನಿಯಲ್ಲೇ ಕೆಲಸ ಮಾಡಿದೆ. ಸುಮಾರು ಮೂರು ತಿಂಗಳ ನಂತರ ನಂಗೆ ಒಂದು ಪಾರ್ಟು ಸಿಕ್ಕಿತ್ತು. ನಾನು ಕೆಲಸ ಮಾಡ್ತಿದ್ದಾಗ ಗುಬ್ಬಿ ವೀರಣ್ಣನವರ ಅಳಿಯ ಕಂಪನಿಯನ್ನು ನೋಡಿಕೊಳ್ತಾ ಇದ್ದರು. ನಾನು ಬೆಳ್ಳಗಿದ್ದುದರಿಂದ ಸ್ತ್ರೀ ಪಾರ್ಟು ಚೆನ್ನಾಗಿ ಒಪ್ಪುತ್ತದೆ ಅಂತ ಸ್ತ್ರೀ‌ವೇಷ ಮಾಡಲು ಸಿಕ್ತಾ ಇತ್ತು. ಗುಬ್ಬಿ ಕಂಪನಿಯಿಂದಲೂ ನಾನು ಬೇಕಾದ್ದನ್ನು ಮಾತ್ರ ತೆಕ್ಕೊಂಡೆ. ನಂಗೆ ರಂಗಗೀತೆಗಳ ಐಡಿಯಾ ಸಿಕ್ಕಿದ್ದು ಅಲ್ಲಿಂದಾನೇ.

ನನಗೆ ಮುಂದೆ ಇನ್ನೂ ಓದಬೇಕೂಂತ ಆಸೆಯಾಯ್ತು. ಅದಕ್ಕೆ ಹಿಂದಿ ಅಧ್ಯಯನ ಆರಂಭಿಸಿದೆ (ಮುಂದಿನ ಜೀವನ ಸಂಕ್ಷಿಪ್ತವಾಗಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದ್ದು, ಪ್ರೇಮಾರ ಭೇಟಿ, ವಿವಾಹ ಇತ್ಯಾದಿ). ನಾನು ಪ್ರೇಮ, ಕಾಶಿಯಲ್ಲಿ ಐದು ವರ್ಷ ಒಟ್ಟಿಗೆ ಇದ್ದೆವು. ಇದಲ್ಲದೆ ಅಲ್ಲಿ ಕೂಡ ಕೆಲವು ಕಾಲ ಒಟ್ಟಿಗೆ ಕಳೆದದ್ದು ಮಧುರವಾಗಿತ್ತು. ಕಾಶಿಯಲ್ಲಿದ್ದಾಗ ಒಂದು ಸಲ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ಆಗ ಮದುವೆಯೂ ಆಗಿತ್ತು. ಆದರೆ ಕೆಲಸ ಸಿಕ್ಕಿರಲಿಲ್ಲ. ಹೀಗೆ ಜಿಗುಪ್ಸೆಗೊಂಡು ತುಂಬಿ ಹರಿಯುತ್ತಿದ್ದ ಗಂಗಾ ನದಿಗೆ ಹರಿಯುತ್ತಿದ್ದೆ. ಹಾರಿದ್ದು ದಡದ ಸಮೀಪವಾದ್ದರಿಂದ ಈಜಿಕೊಂಡು ವಾಪಸು ಬಂದುಬಿಟ್ಟೆ.

ನನ್ನ ಜೀವನದ ಇನ್ನೊಂದು ಆಕ್ಸಿಡೆಂಟ್ ಅಂದ್ರೆ ನಂಗೂ ಪ್ರೇಮಾಗು ಇನ್ನೊಂದು ದಿನ ಕೆಲಸ ಸಿಕ್ಕಿದ್ದು. ಎರಡೂ ಅಪಾಯಿಂಟ್ಮೆಂಟ್ ಕಾಗದಗಳು ಒಂದೇ ದಿನ ನಮಗೆ ಸಿಕ್ಕಿದುವು.

ಊರಿಗೆ ವಾಪಾಸಾಗಬೇಕು ಅಂತ ಕೇಳಿದ್ದೀರಿ. ನಾನು ಬರಬಾರದೆಂದೇನೂ ಇಲ್ಲ. ಇದರಿಂದ ವೃತ್ತ ಪೂರ್ಣವಾಗಲೂ ಬಹುದು. ಆದ್ದರಿಂದ ಇದರ ಬಗ್ಗೆ ಈಗಲೇ ಏನೂ‌ ನಿರ್ಧಾರ ಹೇಳಲಾರೆ. ಆದರೆ ನಾನು ಹುಟ್ಟಿದೂರಿಗೆ ಏನಾದರೂ‌ ಮಾಡಬೇಕೂಂತ ಆಸೆ ನನಗಿದೆ. ಮೊದಲು ಸಂಗೀತದ ಕ್ಯಾಸೆಟ್ಟುಗಳನ್ನೂ, ಪ್ಲೇಯರನ್ನೂ ಕೊಡೋಣವೇ ಅಂದುಕೊಂಡೆ. ಅದನ್ನು ದಿನಾ ಯಾರಾದರೂ ಹಾಕಬೇಕು. ಚೆನ್ನಾಗಿ ಜೋಪಾನ ಮಾಡಬೇಕು. ಇದು ಅಷ್ಟು ಸಮಂಜಸ ವಾಗಲಾರದೇನೋ. ಇನ್ನು ಪುಸ್ತಕಗಳು. ಒಂದಿಷ್ಟು ಪುಸ್ತಕಗಳನ್ನು ಕೊಡಬಲ್ಲೆ. ಮಕ್ಕಳಿಗೆ ಉಪಯೋಗವಾಗುವಂಥದ್ದು. ಅದೂ ಅಲ್ಲದಿದ್ದರೆ ರಂಗಾಯಣ ತಂದು ನಾಟಕ ಆಡಬಹುದು. ಊರವರು ಊಟ, ವಸತಿ ಅನುಕೂಲ ಮಾಡಿಕೊಟ್ಟರೆ ಸಾಕು. ನನಗೆ ಇದು ಸಾಧ್ಯವಾಗಬಹುದು ಅಂತ ಅನ್ನಿಸುತ್ತದೆ.

ನನ್ನ ಹುಟ್ಟೂರಿನ ನೆನಪುಗಳು ಸದಾ ಹಸಿರಾಗುವಂಥದ್ದು. ಅದಕ್ಕೆ ಇನ್ನೂ‌ಕಪ್ಪಾಗಿಯೇ‌ ಉಳಿದಿರುವ ತಲೆಗೂದಲೇ‌ ಸಾಕ್ಷಿ. ಕೂದಲು ಹುಟ್ಟೂರಿನದ್ದು. ಗಡ್ಡ ಆಮೇಲಿನದ್ದು. ಅದಕ್ಕೇ‌ ಅದು ಬಿಳಿಯಾದರೂ, ಕೂದಲು ಕಪ್ಪಾಗಿಯೇ ಇದೆ.

No comments:

Post a Comment