Horizontal Menu

Drop Down MenusCSS Drop Down MenuPure CSS Dropdown Menu

Saturday, 8 March 2014

ಕೆರೆಗೆ ಹಾರ ಮತ್ತು ಗಿರಿಬಾಲೆ - ಒಂದು ಪಾಮರ ವಿಮರ್ಶೆ

'ಕೆರೆಗೆ ಹಾರ' ಎನ್ನುವ ಹೆಸರೇ ಅರ್ಥಪೂರ್ಣ. 'ಹಾರ' ಎಂದರೆ 'ಹೂವಿನ ಹಾರ'ವೋ ಅಥವಾ 'ತಿನ್ನ, ಕುಡಿಯ, ಮಾಡ' ಎಂದೆಲ್ಲ ನಾವು ಹೇಳುವಂತೆ 'ಹಾರಲಿಕ್ಕಿಲ್ಲ' ಅಂದರೆ 'ನಾನು ಕೆರೆಗೆ ಹಾರಲಾರೆ' ಎನ್ನುವ ನಿಷೇಧಾರ್ಥಕ ಕ್ರಿಯಾಪದವೋ - ಅಂತೂ ನಾಟಕಕರ್ತನ ಸೃಜನಶೀಲತೆಯನ್ನು ಮೆಚ್ಚಬೇಕು. ನಿನ್ನೆ ಕುಕ್ಕಾಜೆಯ ಬಿ.ವಿ.ಕಾರಂತ ನಾಟಕೋತ್ಸವದಲ್ಲಿ ಪುತ್ತೂರಿನ ಹವ್ಯಾಸಿಗಳಿಂದ ಇದರ ರಂಗ ಪ್ರಯೋಗ. ಇದಕ್ಕೂ ಮೊದಲು ಮೋಹನ್ ಸೋನ ಬಿ.ವಿ.ಕಾರಂತರ ಬಗ್ಗೆ ಆಪ್ತವಾಗಿ ಮತ್ತು ಪ್ರಾಮಾಣಿಕವಾಗಿ ನಾಲ್ಕು ಮಾತಾಡಿದ್ದು ಚೆನ್ನಾಗಿತ್ತು. ಸುಮ್ಮನೆ ಅಲ್ಲಿ ನೆರೆದಿದ್ದವರನ್ನು ಸಂತೋಷಪಡಿಸಲು ಅವರು ಕಾರಂತರ ಬಗ್ಗೆ ಅವರ ಹುಟ್ಟೂರಿನ ಬಗ್ಗೆ ಸನ್ಮಾತುಗಳನ್ನು ಹೇಳಿದಂತೆ ಕಾಣಲಿಲ್ಲ. ಈ‌ 'ಕೆರೆಗೆ ಹಾರ'ದ ಪ್ರಯೋಗ, ಗೃಹಕೃತ್ಯದಲ್ಲಿ, ಸಂಸಾರದ ಕಷ್ಟಸುಖಗಳಲ್ಲಿ ತೊಡಗಿರುವ ಒಂದಷ್ಟು ಜನಸೇರಿ ಬಿಡುವಿನ ಸಮಯದಲ್ಲಿ ಮಾಡಿದ್ದು - ಎಂದು ಅವರು ಹೇಳಿದ್ದು ಪ್ರಯೋಗದ ಮಹತ್ತನ್ನು ಸಾರಿಹೇಳಿದಂತಿತ್ತು. ಏಕೆಂದರೆ ಅಭಿನಯವಲ್ಲದೆ ಇತರೆ ಕೃಷಿ/ಉದ್ಯೋಗದಲ್ಲಿ ತೊಡಗಿರುವವರಿಗೆ, ಅದರಲ್ಲೂ ಮಹಿಳೆಯರಿಗೆ ಬಿಡುವಿನ ಸಮಯವೆಂಬುದು ಇದೆಯೆ? ಅವರೇನು ವಾರಕ್ಕೆ ಎರಡು ರಜೆ ಅನುಭವಿಸುವ, ಪ್ರವೃತ್ತಿ ಬಿಡಿ, ವೃತ್ತಿಯನ್ನೇ ತಮ್ಮ ಬಿಡುವಿನಲ್ಲಿ ಮಾಡುವ ಆಧುನಿಕರೆ? ಈ ಮಸೂರದಲ್ಲಿ ನಿನ್ನೆಯ ಕೆರೆಗೆ ಹಾರವನ್ನು ನೋಡಿದರೆ ಅದರ ಸೂಕ್ಷ್ಮತೆಗಳು ಇನ್ನಷ್ಟು ಕಂಡಾವು.

ನೀರಿಲ್ಲದೆ ಪರಿತಪಿಸುವ ಊರ ಜನತೆ ಒಂದು ಕೆರೆ ತೋಡುವುದು, ಅದರಲ್ಲಿ ನೀರು ಸಿಗದಾಗ, ಜ್ಯೋತಿಷಿಯೊಬ್ಬರು ಹೇಳುವಂತೆ ಊರ ಗೌಡನ ಸೊಸೆಯೊಬ್ಬಳು ಬಲಿಯಾಗಬೇಕೆಂದು ತಿಳಿಯುವುದು. ಗೌಡರ ಸೊಸೆಯಂದಿರಲ್ಲಿ 'ಪಾಪದವಳೊಬ್ಬಳು' ಬಲಿಯಾಗುವುದು. ಇದಿಷ್ಟು ಕಥೆ. ನಾಟಕ ಇರುವುದು ಉತ್ತರ ಕರ್ಣಾಟಕದ ಭಾಷೆಯಲ್ಲಿ. ಆಡಿದ್ದು ಮಂಗಳೂರಿನವರು. ಮಂಗಳೂರಿನವರೆಂದ ಮೇಲೆ 'ನನಿಗೆ ಅವನನ್ನು ಗೊತ್ತುಂಟು ಮಾರಾಯ' ಎನ್ನುವಂಥ ಭಾಷೆ ಅಲ್ಲಲ್ಲಿ ತೂರದಿರಬೇಕಾದರೆ ಪ್ರಯತ್ನ ಬಹಳ ಬೇಕು. ಆದ್ದರಿಂದ ಭಾಷೆಯಲ್ಲಿ, ಉಡುಗೆ ತೊಡುಗೆಯಲ್ಲಿ ಅಲ್ಲಲ್ಲಿ ಉ.ಕ, ದ.ಕ ಗಳ ಕಸಿ ಆಗಿದೆ. ಇದನ್ನು ಸಂಪೂರ್ಣವಾಗಿ ಇಲ್ಲಿನ ಕನ್ನಡದಲ್ಲಿ ಅಥವಾ ತುಳುವಿನಲ್ಲಿ ಮಾಡುವುದು ಇಲ್ಲಿನ ಮಟ್ಟಿಗೆ ಹೊಸ ಪ್ರಯೋಗ ಆಗಬಹುದೇನೋ.


ಗೌಡನ ಸೊಸೆಯಂದಿರ ಮಧ್ಯೆ 'ಬಲಿಯಾಗುವವರು ಯಾರು' ಎಂದು ಮಾತುಕತೆ ನಡೆಯುವಾಗ ಒಬ್ಬೊಬ್ಬರು ಒಂದೊಂದು ಮನೆಕೆಲಸ ಮಾಡುತ್ತಿರುವುದ ಚಿತ್ರಣದಲ್ಲಿ ನಿರ್ದೇಶಕರ ಸೂಕ್ಷ್ಮತೆ ಗಮನೀಯ. ಒಬ್ಬಾಕೆ ತೆಂಗಿನ ಕಾಯಿ ಹೆರೆಯುತ್ತಿರುವುದು, ಮತ್ತು ಅದರ ಶಬ್ದ ಮಾತುಕತೆಯ ಮಧ್ಯೆ ಸೇರಿ ಮಾಡುವ ವಿಶೇಷ ಪರಿಣಾಮ ದೃಶ್ಯದ ಸಹಜತೆಗೆ ತುಂಬಾ ಪೂರಕವಾಗಿತ್ತು. ಭಾಗೀರಥಿ ಬಲಿಯಾಗುವ ನೋವಿನಲ್ಲಿ ಇರುವಾಗ ತನ್ನ ಗಂಡನ ನೆನಪು ಮಾಡಿಕೊಳ್ಳುವುದು, ಅವನು ಕನಸಿನಲ್ಲಿ ಬಂದು ಕೋಲಾಟ ಆಡುವುದು ಇತ್ಯಾದಿಗಳ ಚಿತ್ರಣ ನಿಜಕ್ಕೂ ಚೆನ್ನಾಗಿತ್ತು. ಸಾಯುವುದು ಖಚಿತವಾದ ಬಳಿಕವೂ ಆಕೆ ತನ್ನ ಹುಟ್ಟಲಿರುವ ಮಗುವಿಗೆ ತಲೆದಿಂಬು ಮಾಡುತ್ತಾ ತನ್ನ ಸಾವಿನ ಬಗ್ಗೆ ಮಾತನಾಡುವ ದೃಶ್ಯ ಮನಮುಟ್ಟುವಂಥದ್ದು. ಇದರಲ್ಲಿ ಮಗುವಿನ ತಲೆದಿಂಬು ಜೀವವನ್ನು ಪ್ರತಿನಿಧಿಸಿದರೆ ಭಾಗೀರಥಿಯ ಮಾತುಗಳು ಸಾವಿನೆಡೆಗೆ ಇವೆ. ನಾಟಕ ಬಿಡಿ, ನಿಜ ಜೀವನದಲ್ಲಾದರೂ, ರೋಗರುಜಿನಗಳಿಂದ ಸಾವು ಖಚಿತವಾದ ಯಾವುದೇ ಮನುಷ್ಯ ಮತ್ತು ಅವನ ಮನೆಯವರು 'ಸಾವು ತಪ್ಪಿ ಹೋಗಬಹುದಾದ' ಯಾವುದೋ ಒಂದು ಸಾಧ್ಯತೆ (probability), ಉಗುರಿನೆಡೆಯ ಒಂದು ಜೀವಸೆಲೆಯ ನಿರೀಕ್ಷೆ, ಸಂಭವಿಸಬಹುದಾದ ಪವಾಡದ ಆಸೆಯಿಂದ ಬತ್ತಿ ಮುಗಿಯುವ ದೀಪಕ್ಕೆ ಎಣ್ಣೆ ಹಾಕುವ ಹಾಗೆ ಭಾಗೀರಥಿ ತಲೆದಿಂಬು ಹೊಸೆಯುತ್ತಾಳೆ.


ಒಂದೊಂದು ಅಗುಳನ್ನು ಹೊಸಕಿ ಅನ್ನದ ಬೇವನ್ನು ನೋಡಿದರೆ ಆಮೇಲೆ ತಿನ್ನಲು ಏನೂ ಉಳಿಯಲಾರದಷ್ಟೆ. ಆದ್ದರಿಂದ ಕೆರೆಗೆ ಹಾಕಿದ ಹಾರದಲ್ಲಿ ಪೋಣಿಸಿದ ಹೂಗಳು ಅರಳಿವೆಯೇ, ಬಾಡಿವೆಯೇ ಎಂದು ನೋಡದೆ ಒಟ್ಟಂದದಲ್ಲಿ ಅದು ಸೃಜಿಸುವ ಸೌಂದರ್ಯವನ್ನು ಕಂಡರೆ ನಿನ್ನೆಯ ಪ್ರಯೋಗ ಸಾರ್ಥಕ. ದೊಡ್ಡ ಖರ್ಚಿನಲ್ಲಿ ನಾಟಕ ಆಡಿಸಲು ದೂರದೂರಿನಿಂದ ತಂಡಗಳನ್ನು ಕರೆಸದೆ, ದುಡಿದು ದಣಿದ ಸ್ಥಳೀಯರು (ಕುಕ್ಕಾಜೆಯೂ, ಪುತ್ತೂರೂ‌ ಸ್ಥಳಿಯವೇ) ಸಂಜೆ ಹೊತ್ತಿಗೆ ಕಲೆತು ಉಲ್ಲಾಸಕ್ಕಾಗಿ ಈ ರೀತಿಯ ನಾಟಕಗಳನ್ನು ಆಡುವುದೇ ನಿಜವಾದ ರಂಗಕ್ರಾಂತಿ (ನನ್ನ ವೈಯಕ್ತಿಕ ಅಭಿಪ್ರಾಯ). ಇಂತಹ ಇನ್ನೊಂದು ಅದ್ಭುತ masterpiece ನಾನು ಕಂಡದ್ದೆಂದರೆ ದೇರಾಜೆ ಮತ್ತು ಪುಟ್ಟ ಮಕ್ಕಳ 'ಪೂರ್ವ ರಂಗದ ಕೊನೆಗೆ'. ಸ್ಥಳೀಯ ಮನರಂಜನೆ (ಟಿ.ವಿ, ಸಿನಿಮಾಗಳ ಹಂಗಿಲ್ಲದ), ಬಹುರಾಷ್ಟ್ರೀಯತೆಯ ಹಂಗಿಲ್ಲದ ಸ್ಥಳೀಯ ಆಹಾರ-ವಿಹಾರ-ಜೀವನ ಪದ್ಧತಿ ನಾವಿಂದು ಎದುರಿಸುತ್ತಿರುವ ಯಾವುದೇ ಸಮಸ್ಯೆಗೂ‌ ಪರಿಹಾರ. 'Go-local' (ಸ್ಥಳೀಯವಾಗಿ ಜೀವಿಸಿ) ಎನ್ನುವುದೊಂದು ದೊಡ್ಡ ಚಳುವಳಿ. ಅದರ ಒಂದು ಮೂರ್ತರೂಪವಾಗಿ (realization) ನಾನು ಕೆರೆಗೆ ಹಾರವನ್ನು ಕಂಡೆ. ತಂಡಕ್ಕೆ ಅಭಿನಂದನೆಗಳು.


        *‌*‌*‌


ಕೃಷ್ಣಮೂರ್ತಿಯವರನ್ನು ನಾನು ವೈಯಕ್ತಿಕವಾಗಿ ತಿಳಿದಿಲ್ಲ. ಅವರನ್ನು ಹಲವು ಬಾರಿ ನೋಡಿದ್ದೇನಷ್ಟೆ. ಆಕಾಶವಾಣಿಯ ಕೃಷಿರಂಗದ ಸಂಗೀತದಂತೆ (ತನ್ನಾನಾ ತನ್ನಾನಾ ತನ್ನನಾನ ತಾನಾನ..) ಅವರು ಪ್ರತೀಬಾರಿ ನೋಡುವಾಗ ಹಾಗೇ‌ ಇದ್ದಾರೆ. ನೀಲಿ ಜೀನ್ಸು ಮತ್ತೊಂದು ಇಸ್ತ್ರಿ ಇಲ್ಲದ ಅಂಗಿ. ಮೇಲ್ನೋಟದ ಸೌಂದರ್ಯದಲ್ಲಿ ಉಪೇಕ್ಷೆ ಮನುಷ್ಯನಿಗೆ ಆಳದ ಚಿಂತನೆಗೆ ಹೆಚ್ಚಿನ ಸಮಯಾವಕಾಶ ಮತ್ತು ಮನಾವಕಾಶಗಳನ್ನು ಕೊಡುತ್ತದೆ ಎನ್ನುವುದು  ನನ್ನ ವೈಯಕ್ತಿಕ ಅಭಿಪ್ರಾಯ. ಅವರ ಚಿಂತನೆ ಅವರು ಮಾಡಿದ ಪುಟ್ಟ್ ಭಾಷಣದಲ್ಲಿ ಸ್ಪಷ್ಟ.


ಕೃಷ್ಣಮೂರ್ತಿಯವರ ಸೌಭಾಗ್ಯವತಿ, ಶ್ರೀಮತಿ.ಸುಶೀಲಾ ಕೆಳಮನೆ ಅಭಿನಯಿಸಿದ ಗಿರಿಬಾಲೆ ನಿನ್ನೆಯ ಎರಡನೆಯ ನಾಟಕ. ಸರಸ್ವತಿಬಾಯಿ ರಾಜವಾಡೆ(ಗಿರಿಬಾಲೆ)ಯವರ ಬಗ್ಗೆ ಮಯೂರದಲ್ಲಿ ವಿವರವಾದ ಲೇಖನಗಳು ಬಂದಿದ್ದರಿಂದ ನನಗೆ ಅವರ ಹೆಸರು ಸಾಧನೆಗಳ ತಿಳಿವು ಸ್ವಲ್ಪ ಮಟ್ಟಿಗೆ ಇತ್ತು. ನಿನ್ನೆಯ ನಾಟಕ ಹೆಚ್ಚುಕಮ್ಮಿ ಸರಸ್ವತಿಬಾಯಿಯವರೇ ತಮ್ಮ ಜೀವನ ವೃತ್ತಾಂತವನ್ನು ಹೇಳಿದಂತಿದ್ದುದರಿಂದ ಇನ್ನು ಅದು ಅಚ್ಚೊತ್ತಿ ನಿಲ್ಲಬಹುದೇನೋ. ಅದುವೇ‌ ನಾಟಕದ ಉದ್ದೇಶ ಮತ್ತು ಯಶಸ್ಸು. ಸುಶೀಲಾ ಮತ್ತು ಸರಸ್ವತಿಯವರನ್ನು ಅಕ್ಕಪಕ್ಕ ಕೂಡಿಸಿದರೆ ಯಾರು ಹೆಚ್ಚು ಸುಲಕ್ಷಣವಂತೆ ಇರಬಹುದು ಎನ್ನುವುದೊಂದು ಈಗ ಉತ್ತರ ಸಿಗದ ಪ್ರಶ್ನೆ (ಗಿರಿಬಾಲೆ ಈಗಿಲ್ಲ) - ಅಂದರೆ ಶ್ರೀಮತಿ ಸುಶೀಲಾ ಈ‌ ನಾಟಕಕ್ಕೆ ಸೂಕ್ತೆ ಎನ್ನುವುದು ನಿಸ್ಸಂಶಯ. ಕೃಷ್ಣಮೂರ್ತಿಯವರು ಮೊದಲೇ ಆತಂಕ ವ್ಯಕ್ತಪಡಿಸಿದಂತೆ ನಾಟಕದುದ್ದಕ್ಕೂ ಮಾತು ಮತ್ತು ಸ್ವಲ್ಪ ಆಂಗಿಕ ಅಭಿನಯಗಳಷ್ಟೇ ಇವೆ. ಇದರಲ್ಲಿ ಪ್ರೇಕ್ಷಕರ involvement ಅತೀ ಮುಖ್ಯ. ಅದಕ್ಕೆ ಜೀವ ತುಂಬಲು ಗಿರಿಬಾಲೆಯವರ ನಿತ್ಯ ಜೀವನಕ್ಕೆ ಹೊಂದುವಂತಹ ಒಂದಷ್ಟು ಕೆಲಸವನ್ನು ರಂಗದ ಮೇಲಿನ ಗಿರಿಬಾಲೆ ಮಾಡುತ್ತಿದ್ದುದು ನಾಟಕದಲ್ಲಿ filling agent ನಂತೆ ಕೆಲಸ ಮಾಡಿದೆ (ಹೂಕಟ್ಟುವುದು, ಆರತಿಯ ತಟ್ಟೆಯಮೇಲೆ ಬರೆಯುವುದು, ದೇವರ ಪೂಜೆ ಇತ್ಯಾದಿ - ಬಹುಶ: ಅವರ ಇಳಿವಯಸ್ಸಿನ ಶಾರದಾ ಮಂದಿರದ ಜೀವನಕ್ಕೆ ಹೊಂದುವ ಕೆಲಸಗಳು, ಅವರು ಕಥೆ ಹೇಳುತ್ತಿರುವುದು ಇಳಿವಯಸ್ಸಿನಲ್ಲೇ ತಾನೇ).


ಅಷ್ಟು ಹಳೆಯ ಕಾಲದ ಹೆಣ್ಣು ಮಗಳೊಬ್ಬಳ ದಟ್ಟದಾರಿದ್ರ್ಯದ ಜೀವನ, ಮೂಕಿ ಚಲನಚಿತ್ರದಲ್ಲಿ ಅಭಿನಯಿಸಿವುದು, ದೇಶವಿಡೀ ನಾಟಕ ಕಂಪನಿಯಲ್ಲಿ ಸುತ್ತುವುದು, ಅತೀ ಶ್ರೀಮಂತ ಮುದುಕನೊಬ್ಬನೊಡನೆ ವೈವಾಹಿಕ ಜೀವನ ನಡೆಸುವುದು, ವಿದೇಶ ಪ್ರವಾಸ, ಶಾರದಾ ಮಂದಿರದಲ್ಲಿ ಜೀವನ ಹೀಗೆ ಘಟನೆಗಳು ತುಂಬಿತುಳುಕುವ ಜೀವನದಲ್ಲಿ ಬದುಕುವುದು ಎಷ್ಟರಮಟ್ಟಿಗೆ ದುರಂತವೋ ಅಷ್ಟರಮಟ್ಟಿಗೆ ಭಾಗ್ಯವೂ ಹೌದೇನೋ. ಏಕೆಂದರೆ ಪ್ರತಿಯೊಬ್ಬರ ಜೀವನದಲ್ಲೂ ಘಟನೆಗಳು ಜರಗುತ್ತವೆ. ಆದರೆ ಅದನ್ನು ಗ್ರಹಿಸುವ, ಚಿಂತನೆಯ ಮೂಸೆಯಲ್ಲಿ ಕಾಯಿಸಿ ಅನುಭವದ ಪಾಕ ಪಡೆಯುವ ಶಕ್ತಿ ಎಲ್ಲರಿಗಿಲ್ಲ. ಗಿರಿಬಾಲೆಯವರಿಗೆ ನಿಸ್ಸಂಶಯವಾಗಿ ಆ ಶಕ್ತಿ ಇತ್ತು. ಅದು ಅವರ ಬರಹದಲ್ಲಿ ಕಂಡಿದೆ (confession - ನಾನು ಅವನ್ನು ಓದಿಲ್ಲ). ಪತ್ರಿಕೆಯಂತಹ ಸಾಮಾಜಿಕ ಕೆಲಸವೊಂದು ಸಾರ್ವಜನಿಕ ದುಡ್ಡಿನಲ್ಲೇ ನಡೆಯಬೇಕಲ್ಲದೆ ಒಬ್ಬೊಬ್ಬರ ದುಡ್ಡಿನಲ್ಲಿ ನಡೆಯಬಾರದೆಂದು ಗಿರಿಬಾಲೆ ಹೇಳುವುದು ಅವರ ವಿಮರ್ಶೆಯ ಗಟ್ಟಿತನವನ್ನು ಸೂಚಿಸುತ್ತದೆ. 'ಪತ್ರಿಕೆಯೊಂದು ಚಂದಾದಾರನ ಹಣದಲ್ಲಿ ನಡೆಯಬೇಕಲ್ಲದೆ ಜಾಹೀರಾತಿನ ಬಲದಲ್ಲಿ ನಡೆಯಬಾರದು' ಎಂದು ಗಾಂಧೀಜಿ ಹೇಳಿರುವುದು(ಸತ್ಯಾನ್ವೇಷಣೆ - ಆತ್ಮಕಥೆ) ಕಾರ್ಪೊರೇಟ್ ಸಂಸ್ಥೆಗಳ ಬಲದಲ್ಲಿ ನಡೆಯುವ ನಮ್ಮ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳ ಖೊಟ್ಟಿತನವನ್ನು ಬಟಾಬಯಲು ಮಾಡುತ್ತದೆ.


ತನ್ನನ್ನು ದನಕ್ಕೆ ಹೊಡೆದಂತೆ ಹೊಡೆಯುತ್ತಿದ್ದ ತಾಯಿಯ ಮೇಲೆ ಗಿರಿಬಾಲೆ ದ್ವೇಷರಹಿತ ಪ್ರೀತಿಯನ್ನು ಇಟ್ಟು ಕೊನೆಕಾಲದವರೆಗೆ ನೋಡಿಕೊಂಡರಂತೆ. ಆ unconditional ಪ್ರೀತಿಯನ್ನು ಹೊರಸೂಸುವಂತೆಯೇ ಸುಶೀಲಕ್ಕನ ಮುಖದ ಮೇಲಿನ ನಗು ಇತ್ತು. ಒಂದು ಘಂಟೆಯಲ್ಲಿ ಎಲ್ಲಿಯೂ ಅಸಹಜವಾಗದಂತೆ, ಆಭಾಸವಾಗದಂತೆ, ನಿರರ್ಗಳವಾಗಿ ತನ್ನದೇ ಸ್ವಂತ ಅನುಭವವನ್ನು ಹೇಳಿಕೊಳ್ಳುವಂತೆ ಅವರು ಗಿರಿಬಾಲೆಯ ಜೀವನವನ್ನು ವಿವರಿಸಿದರು. ಅದು 'ಗಿರಿಬಾಲೆ ಹೇಳಿದಂತೆಯೇ ಇತ್ತು' ಅನ್ನುವುದೇ ನಾವು ಈ ಪ್ರಯೋಗಕ್ಕೆ ಕೊಡಬಹುದಾದ ಅತ್ಯುತ್ತಮ ಹೊಗಳಿಕೆಯೇನೋ. ಸಂಗೀತ ಶೃತಿಬದ್ಧವಾಗಿದ್ದರೂ ಯಾಕೋ ನಿರೂಪಣೆಗೆ ತೊಡಕಾಗಿ ಇದ್ದಂತೆ ನನಗನಿಸಿತು. ಇದರ ಮೂಲಕೃತಿ ವೈದೇಹಿಯವರದು ಎನ್ನುವುದು ವಿವರಗಳು ವ್ಯಕ್ತವಾಗುವ ರೀತಿ, ಸಾಮಾನ್ಯ ಜೀವನದ ಘಟನೆಗಳು ಆಪ್ತವಾಗಿ ನಮ್ಮದೇ ಎಂಬಂತೆ ಬಿಚ್ಚಿಕೊಳ್ಳುವ ಕ್ರಮದಲ್ಲಿ ಸ್ಪಷ್ಟ.


ಪ್ರೇಕ್ಷಕರ ಸಂಖ್ಯೆ ಅತೀ‌ಕಡಿಮೆ ಇರುವ, ಗೌರವಧನ ಶೂನ್ಯಕ್ಕೆ ಹತ್ತಿರ ಇರುವ ಸನ್ನಿವೇಶದಲ್ಲಿ ತಮ್ಮದೇ ನಿರೀಕ್ಷೆಯನ್ನು ತಲುಪಲು ಮಾಡುವ ಕಲೆ(performing to meet one's own expectations) ನಿಜವಾದ ಗಟ್ಟಿ ಕಲೆ. ಮೈಸೂರಿನಲ್ಲೊಮ್ಮೆ, ಹತ್ತೇ‌ ಜನ ಇದ್ದರೂ ಮಂಟಪ ಉಪಾಧ್ಯರು ತುಂಬಿತುಳುಕುವ ಸಭೆಗೆ ನೀಡುವಂತೆ ಮಂತ್ರಮುಗ್ಧಗೊಳಿಸುವ ಏಕವ್ಯಕ್ತಿ ಅಭಿನಯ ನೀಡಿದ್ದನ್ನು ನನಗೊಬ್ಬರು ಹೇಳಿಕೊಂಡಿದ್ದರು. ನಿನ್ನೆಯದೂ ಅದರಂತೆ. ಅಭಿನಂದನೆಗಳು.


ನಾಟಕದ ಅಭಿನಯ ಮತ್ತು ವಿಮರ್ಶೆಗಳೆರಡರಲ್ಲೂ ನನಗೆ ಹಿಡಿತವಿಲ್ಲ. ತಪ್ಪುಗಳನ್ನು ಮುಕ್ತವಾಗಿ ಕೆಳಗೆ ವಿಮರ್ಶಿಸಿ.

No comments:

Post a Comment