'ಕೆರೆಗೆ ಹಾರ' ಎನ್ನುವ ಹೆಸರೇ ಅರ್ಥಪೂರ್ಣ. 'ಹಾರ' ಎಂದರೆ 'ಹೂವಿನ ಹಾರ'ವೋ ಅಥವಾ 'ತಿನ್ನ, ಕುಡಿಯ, ಮಾಡ' ಎಂದೆಲ್ಲ ನಾವು ಹೇಳುವಂತೆ 'ಹಾರಲಿಕ್ಕಿಲ್ಲ' ಅಂದರೆ 'ನಾನು ಕೆರೆಗೆ ಹಾರಲಾರೆ' ಎನ್ನುವ ನಿಷೇಧಾರ್ಥಕ ಕ್ರಿಯಾಪದವೋ - ಅಂತೂ ನಾಟಕಕರ್ತನ ಸೃಜನಶೀಲತೆಯನ್ನು ಮೆಚ್ಚಬೇಕು. ನಿನ್ನೆ ಕುಕ್ಕಾಜೆಯ ಬಿ.ವಿ.ಕಾರಂತ ನಾಟಕೋತ್ಸವದಲ್ಲಿ ಪುತ್ತೂರಿನ ಹವ್ಯಾಸಿಗಳಿಂದ ಇದರ ರಂಗ ಪ್ರಯೋಗ. ಇದಕ್ಕೂ ಮೊದಲು ಮೋಹನ್ ಸೋನ ಬಿ.ವಿ.ಕಾರಂತರ ಬಗ್ಗೆ ಆಪ್ತವಾಗಿ ಮತ್ತು ಪ್ರಾಮಾಣಿಕವಾಗಿ ನಾಲ್ಕು ಮಾತಾಡಿದ್ದು ಚೆನ್ನಾಗಿತ್ತು. ಸುಮ್ಮನೆ ಅಲ್ಲಿ ನೆರೆದಿದ್ದವರನ್ನು ಸಂತೋಷಪಡಿಸಲು ಅವರು ಕಾರಂತರ ಬಗ್ಗೆ ಅವರ ಹುಟ್ಟೂರಿನ ಬಗ್ಗೆ ಸನ್ಮಾತುಗಳನ್ನು ಹೇಳಿದಂತೆ ಕಾಣಲಿಲ್ಲ. ಈ 'ಕೆರೆಗೆ ಹಾರ'ದ ಪ್ರಯೋಗ, ಗೃಹಕೃತ್ಯದಲ್ಲಿ, ಸಂಸಾರದ ಕಷ್ಟಸುಖಗಳಲ್ಲಿ ತೊಡಗಿರುವ ಒಂದಷ್ಟು ಜನಸೇರಿ ಬಿಡುವಿನ ಸಮಯದಲ್ಲಿ ಮಾಡಿದ್ದು - ಎಂದು ಅವರು ಹೇಳಿದ್ದು ಪ್ರಯೋಗದ ಮಹತ್ತನ್ನು ಸಾರಿಹೇಳಿದಂತಿತ್ತು. ಏಕೆಂದರೆ ಅಭಿನಯವಲ್ಲದೆ ಇತರೆ ಕೃಷಿ/ಉದ್ಯೋಗದಲ್ಲಿ ತೊಡಗಿರುವವರಿಗೆ, ಅದರಲ್ಲೂ ಮಹಿಳೆಯರಿಗೆ ಬಿಡುವಿನ ಸಮಯವೆಂಬುದು ಇದೆಯೆ? ಅವರೇನು ವಾರಕ್ಕೆ ಎರಡು ರಜೆ ಅನುಭವಿಸುವ, ಪ್ರವೃತ್ತಿ ಬಿಡಿ, ವೃತ್ತಿಯನ್ನೇ ತಮ್ಮ ಬಿಡುವಿನಲ್ಲಿ ಮಾಡುವ ಆಧುನಿಕರೆ? ಈ ಮಸೂರದಲ್ಲಿ ನಿನ್ನೆಯ ಕೆರೆಗೆ ಹಾರವನ್ನು ನೋಡಿದರೆ ಅದರ ಸೂಕ್ಷ್ಮತೆಗಳು ಇನ್ನಷ್ಟು ಕಂಡಾವು.